ತರೀಕೆರೆ
ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯ ಒಂದು ತಾಲ್ಲೂಕು ;  ತಾಲ್ಲೂಕಿನ ಆಡಳಿತ ಕೇಂದ್ರ. ತಾಲ್ಲೂಕು ಉ.ಅ. 13(  30- 13(  54' ಮತ್ತು ಪೂ.ರೇ 75( 35' - 76( 9' ನಡುವೆ ಇದೆ.  ಉತ್ತರದಲ್ಲಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮತ್ತು ಚನ್ನಗಿರಿ ತಾಲ್ಲೂಕುಗಳು, ಪಶ್ಚಿಮದಲ್ಲಿ ಚಿಕ್ಕಮಗಳೂರು ಮತ್ತು ಕಡೂರು ತಾಲ್ಲೂಕುಗಳು,  ಪೂರ್ವದಲ್ಲಿ ಚಿತ್ರದುರ್ಗ ಜಿಲ್ಲೆಯ ಹೊಳಲಕೆರೆ ಮತ್ತು ಹೊಸದುರ್ಗ ತಾಲ್ಲೂಕುಗಳು ಇವೆ.  ತಾಲ್ಲೂಕಿನ ವಿಸ್ತೀರ್ಣ 1.240 ಚ.ಕಿಮೀ. ಜನಸಂಖ್ಯೆ 2,24,093 (2001).  ಅಜ್ಜಂಪುರ, ಅಮೃತಾಪುರ, ಲಕ್ಕವಳ್ಳಿ, ಲಿಂಗದಹಳ್ಳಿ, ಶಿವನಿ ಮತ್ತು ತರೀಕೆರೆ ಹೋಬಳಿಗಳಿವೆ.  ತಾಲ್ಲೂಕಿನಲ್ಲಿರುವ ಗ್ರಾಮಗಳ ಸಂಖ್ಯೆ 247.

ಈ ತಾಲ್ಲೂಕು ಭಾಗಶಃ ಮೈದಾನ ಮತ್ತು ಭಾಗಶಃ ಬೆಟ್ಟಸೀಮೆ.  ತಾಲ್ಲೂಕಿನ ಪಶ್ಚಿಮಭಾಗ ಅರೆಮಲೆನಾಡು.  ತಾಲ್ಲೂಕಿನ ಉತ್ತರದಲ್ಲಿರುವ ಉಬ್ರಾಣಿ ಬೆಟ್ಟದ ಕವಲುಗಳು ಅಲ್ಲಲ್ಲಿ ಮೈದಾನದೊಳಕ್ಕೂ ಚಾಚಿವೆ. ಈ ಬೆಟ್ಟಗಳ ಪ್ರದೇಶದಲ್ಲಿ ಹಿಂದೆ ದಟ್ಟವಾದ ಬಿದಿರು ಕಾಡುಗಳಿದ್ದವು. ತಾಲ್ಲೂಕಿನ ನೈಋತ್ಯದಲ್ಲಿ ಬಾಬಾ ಬುಡನ್ ಶ್ರೇಣಿಯ ಒಂದು ಭಾಗ ಹಬ್ಬಿದೆ.  ಈ ಶ್ರೇಣಿಯ ಪಾಶ್ರ್ವಗಳು ಕಾಡಿನಿಂದ ಕೂಡಿವೆ.  ಇದನ್ನು ಅಲ್ಲಲ್ಲಿ ತೆರಪುಮಾಡಿ ಕಾಫಿ ತೋಟಗಳನ್ನು ಬೆಳಸಲಾಗಿದೆ.

ಮೇಲ್ಮೈಲಕ್ಷಣಕ್ಕೆ ಅನುಗುಣವಾಗಿ ಈ ತಾಲ್ಲೂಕಿನ ವಾಯುಗುಣ ವ್ಯತ್ಯಾಸವಾಗುತ್ತದೆ.  ಪಶ್ಚಿಮ ಭಾಗದಲ್ಲಿ ಹೆಚ್ಚು ಮಳೆ. ಜುಲೈ ಅತ್ಯಂತ ಹೆಚ್ಚಿನ ಮಳೆಯ ಕಾಲ.  ವಾರ್ಷಿಕ ಸರಾಸರಿ ಮಳೆ 836.7 ಮಿಮೀ. ಅಜ್ಜಂಪುರದ ಸುತ್ತ, ತಾಲ್ಲೂಕಿನ ಪೂರ್ವಗಡಿಯವರೆಗೆ ಕಪ್ಪು ಹತ್ತಿ ಮಣ್ಣು ಇದೆ. ಇಲ್ಲಿಯ ಬೆಳೆಗಳು ಗೋದಿ, ಹತ್ತಿ, ಕಡಲೆ ಮುಂತಾದವು.  ಈ ಪ್ರದೇಶದಲ್ಲಿ ಹೆಚ್ಚು ಕಾಡುಗಳಿಲ್ಲ.  ತಾಲ್ಲೂಕಿನ ಉಳಿದ ಭಾಗದಲ್ಲಿ ಕೆಂಪು ಮರಳು ಮತ್ತು ಗರಸು ಮಣ್ಣುಗಳಿವೆ.  ಇಲ್ಲಿ ರಾಗಿ, ಬೇಳೆಕಾಳು ಮುಂತಾದವನ್ನು ಬೆಳೆಯುತ್ತಾರೆ. 

ಉಬ್ರಾಣ ಬೆಟ್ಟದ ಪ್ರದೇಶದಲ್ಲೂ ಬಾಬಾ ಬುಡನ್ ಶ್ರೇಣಿಯ ತಪ್ಪಲಿನಲ್ಲೂ ಕಬ್ಬಿಣದ ಅದುರು ನಿಕ್ಷೇಪಗಳಿವೆ.  ಅಜ್ಜಂಪುರದ ಬಳಿ ಚಿನ್ನ ತೆಗೆಯಲಾಗುತ್ತಿತ್ತು.

ತರೀಕೆರೆ ಪಟ್ಟಣದ ಜನಸಂಖ್ಯೆ 34,073 (2001).. ಇದು ತಾಲ್ಲೂಕಿನ ಮುಖ್ಯ ಸ್ಥಳ.  ಇದು ಉ.ಅ.130 43' ಮತ್ತು ಪೂ.ರೇ.750 49' ಮೇಲೆ, ಚಿಕ್ಕಮಗಳೂರು ಪಟ್ಟಣದಿಂದ ಉತ್ತರಕ್ಕೆ 56 ಕಿಮೀ. ದೂರದಲ್ಲಿ ಇದೆ. ಇದು ಬೀರೂರು-ಶಿವಮೊಗ್ಗ ರೈಲುಮಾರ್ಗದ ಒಂದು ನಿಲ್ದಾಣ.  ಬೆಂಗಳೂರು-ಶಿವಮೊಗ್ಗ ರಸ್ತೆ ತರೀಕೆರೆಯ ಮೂಲಕ ಹಾದು ಹೋಗುತ್ತದೆ.

ಹನ್ನೆರಡನೆಯ ಶತಮಾನದಿಂದ ತರೀಕೆರೆ ಪಟ್ಟಣದ ಇತಿಹಾಸವನ್ನು ಗುರುತಿಸಬಹುದಾಗಿದೆ. ಆ ಶತಮಾನದ ಕೊನೆಯಲ್ಲಿ ಹೊಯ್ಸಳ ದೊರೆಯೊಬ್ಬ ಈಗಿನ ತರೀಕೆರೆಯ ವಾಯುವ್ಯದಲ್ಲಿ ಕಾತೂರ್ ಎಂಬ ಊರೊಂದನ್ನು ಸ್ಥಾಪಿಸಿದನೆಂದೂ ಕನೆಹದ ಅರಸುವಿಗೆ ಈ ಸುತ್ತಣ ಪ್ರದೇಶವನ್ನು ಕೊಡಲಾಯಿತೆಂದೂ ಹೇಳಲಾಗಿದೆ.  ಇವನ ವಂಶದವರಲ್ಲೊಬ್ಬನಾದ ಕಾಮಚಕ್ರೇಶ್ವರರಾಯನೆಂಬವನು ಬಾಬಾ ಬುಡನ್ ಬೆಟ್ಟದ ಬಳಿಯ ಕಾಮನದುರ್ಗವನ್ನು ಕಟ್ಟಿಸಿದ.  ಅನಂತರ ವಿಜಯನಗರದ ಬುಕ್ಕರಾಯ ಇದನ್ನು ವಶಪಡಿಸಿಕೊಂಡು ತನ್ನ ದಣಾಯಕರಲ್ಲೊಬ್ಬನಿಗೆ ನೀಡಿದ.  ಅವನ ಮರಣಾನಂತರ ಇದು ಸಾಳುವ ನರಸಿಂಗರಾಯನ ಕೈಸೇರಿತು.  ಅವನು ತನ್ನ ಸೋದರ ಕಾರ್ತಿಕರಾಯನಿಗೆ ಇದನ್ನು ಕೊಟ್ಟ.  ಕಾರ್ತಿಕರಾಯನ ಮಗ ಕೃಷ್ಣರಾಯ ಇಲ್ಲಿ ಅನೇಕ ನೀರಾವರಿ ಕಾಮ್‍ಗಾರಿಗಳನ್ನು ಮಾಡಿಸಿದ. ಇವುಗಳ ಪೈಕಿ ತರೀಕೆರೆ ಕಟ್ಟೆ ಹೊಳೆ ಪ್ರಸಿದ್ಧವಾದ್ದು.  ಇವನ ಅಳಿಯ ಹಳೆ ರಾಮರಾಯ ಇದನ್ನು ಆಳಿದ. ಅವನ ಕಾಲದಲ್ಲಿ ಬಿಜಾಪುರದ ಸೇನೆ ಇದನ್ನು ವಶಪಡಿಸಿಕೊಂಡಿತು.  ಅನಂತರ ಮೊಗಲರು ಕಾತೂರು ಪ್ರದೇಶವನ್ನು ಬಸವಾಪಟ್ಟಣದ ಪಾಳೆಯಗಾರ ಸರ್ಜ ಹನುಮಪ್ಪನಾಯಕನಿಗೆ ನೀಡಿದರೆಂದು ಹೇಳಲಾಗಿದೆ.  ಇವನ ವಂಶದ ಇದೇ ಹೆಸರಿನ ಪಾಳೆಯಗಾರ ಈಗಿನ ತರೀಕೆರೆಯನ್ನು ನಿರ್ಮಿಸಿದನೆಂದೂ (1569) ಈ ಸ್ಥಳದಲ್ಲಿ ತರೀಮರಗಳು ಹೇರಳವಾಗಿದ್ದುದರಿಂದ ಇದಕ್ಕೆ ತರೀಕೆರೆಯೆಂಬ ಹೆಸರು ಬಂತೆಂದೂ ಹೇಳಲಾಗಿದೆ.  ಆದರೆ 1636ರಲ್ಲಿ ರಣದುಲ್ಲಾಖಾನನ ನಾಯಕತ್ವದಲ್ಲಿ ಬಿಜಾಪುರದ ಸೈನ್ಯ ಬಸವಾಪಟ್ಣವನ್ನು ಆಕ್ರಮಿಸಿಕೊಂಡಾಗ ಸಂತೇಬೆನ್ನೂರನ್ನೂ ವಶಪಡಿಸಿಕೊಂಡಿತೆಂದೂ ಆ ಸ್ಥಳದ ಪಾಳೆಗಾರರು ತರೀಕೆರೆಗೆ ಹಿಂದುರುಗಿದರೆಂದೂ ಕಾಳದುರ್ಗ ಕೋಟೆಯಿಂದ ಅವರು ಆಳಿದರೆಂದೂ ನಂಬಲು ಶಾಸನಗಳ ಆಧಾರಗಳಿವೆ.  ಈ ವಂಶದವರಲ್ಲೊಬ್ಬನಾದ ಹಿರೆ ಹನುಮಪ್ಪನಾಯಕನ ಸೋದರ ಬಾಲಗಿರಿ ನಾಯಕನೆಂಬುವನು ಪೆನುಕೊಂಡದ ವೀರ ವೆಂಕಟಪತಿದೇವನ ಬಲಗೈಯಂತಿದ್ದನೆಂದು ಹೇಳಲಾಗಿದೆ.  ತರೀಕೆರೆಯ ಪಾಳೆಗಾರರು 1761 ರಲ್ಲಿ ಹೈದರ್ ಅಲಿಯಿಂದ ಸೋಲಿಸಲ್ಪಡುವವರೆಗೂ ಈ ಪ್ರದೇಶವನ್ನಾಳುತ್ತಿದ್ದರು.  ಹೈದರ್ ಅಲಿ ಇದನ್ನು ಮೈಸೂರು ರಾಜ್ಯಕ್ಕೆ ಸೇರಿಸಿಕೊಂಡು ಅಲ್ಲಿಯ ಪಾಳೆಗಾರನಿಗೆ ವರ್ಷಾಶನವನ್ನು ನೀಡಿದ.  ಈ ವಂಶದವನೊಬ್ಬ 1830ರ ಬಂಡಾಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದ.  ಇವನ ಮಗನನ್ನು 1834ರಲ್ಲಿ ಬ್ರಿಟಿಷರು ಹಿಡಿದು ಅವನಿಗೆ ಫಾಸಿ ಶಿಕ್ಷೆ ವಿಧಿಸಿದರು.

1899ರಲ್ಲಿ ತರೀಕೆರೆಯಲ್ಲಿ ಒಂದು ರೈಲು ನಿಲ್ದಾಣವಾದ ಮೇಲೆ ಇದು ಬೆಳೆಯಲು ಪ್ರಾರಂಭವಾಯಿತು.  ಇಲ್ಲಿಯ ಪುರಸಭೆ 1870ರಲ್ಲಿ ಅಸ್ತಿತ್ವಕ್ಕೆ ಬಂತು.  ಒಳ್ಳೆಯ ಸಾರಿಗೆ ಸಂಪರ್ಕವಿರುವುದರಿಂದ ಇದೊಂದು ವ್ಯಾಪಾರ ಸ್ಥಳವಾಗಿ ಬೆಳೆಯುತ್ತಿದೆ.  ಪಟ್ಟಣದಲ್ಲಿ ತಂತಿ, ಅಂಚೆ ಮತ್ತು ತಾಲ್ಲೂಕು ಕಚೇರಿಗಳೂ ಶಾಲಾಕಾಲೇಜು ಆಸ್ಪತ್ರೆಗಳೂ ಇವೆ.  ಈ ನಗರದಲ್ಲಿ ಪೂರ್ಣಯ್ಯನ ಹೆಸರಿನಲ್ಲಿ ಒಂದು ಛತ್ರವಿದೆ.  ಈ ಕಟ್ಟಡದ ನಾಲ್ಕು ಕಂಬಗಳು ಬಹುಶಃ ಯಾವುದೋ ದೇವಸ್ಥಾನದವಿರಬೇಕೆಂದು ಊಹಿಸಲಾಗಿದೆ.  ಇಲ್ಲಿರುವ ಎರಡು ಸಿಂಹಗಳ ಶಿಲ್ಪಗಳು ಹಿಂದೆ ತರೀಕೆರೆಯ ಪಾಳೆಗಾರರ ಅರಮನೆಯ ದ್ವಾರವನ್ನು ಅಲಂಕರಿಸಿದ್ದುವೆಂದು ಹೇಳುತ್ತಾರೆ.  ಕತ್ತಿಯನ್ನು ಹಿಡಿದ ಮನುಷ್ಯನ ಮೇಲೆ ತಮ್ಮ ಕಾಲಿನ ಪಂಜಗಳನ್ನು ಊರಿ ನಿಂತಿರುವಂತೆ ಸಿಂಹಗಳನ್ನು ಕೆತ್ತಲಾಗಿದೆ.  ತರೀಕೆರೆಗೆ ಎರಡು ಮೈಲಿ ದೂರದಲ್ಲಿ ಹಳೆಯೂರು ಎಂಬಲ್ಲಿ ಪಾಳು ಬಿದ್ದ ಒಂದು ಕೇಶವ ದೇವಾಲಯವುಂಟು.  ತರೀಕೆರೆಯ ದೇವಸ್ಥಾನವೊಂದರಲ್ಲಿರುವ ವಿಗ್ರಹ ಇಲ್ಲಿಯದಿರಬಹುದೆಂದು ಊಹಿಸಲಾಗಿದೆ.  ತರೀಕೆರೆಗೆ ಅಮರಾವತಿಪುರ ಎಂಬ ಹೆಸರಿತ್ತೆಂದೂ ಇದು ಎರಡನೆಯ ಬಲ್ಲಾಳನ (1173-1220) ದಂಡನಾಯಕ ಲಕುಮರಸ ಕಟ್ಟಿಸಿದ ಒಂದು ಅಗ್ರಹಾರವಾಗಿತ್ತೆಂದೂ ಹಳೆಯೂರಿನ ಶಾಸನವೊಂದರಿಂದ ತಿಳಿದು ಬರುತ್ತದೆ.
(ಎಸ್.ಎನ್.ಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ